ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

“ಸಣ್ಣ ರೈತರ ಜಮೀನಿಗೆ ಹಕ್ಕುಪತ್ರ  ನೀಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು “

Share:

ಅವರು ಬೆಂಗಳೂರಿನಲ್ಲಿಯೇ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಕೃಷಿ ಮತ್ತು ಹಳ್ಳಿಯ ಬದುಕಿನೆಡೆಗಿದ್ದ ತುಡಿತ ಮಲೆನಾಡಿನ ಆ ಹಳ್ಳಿಗೆ ಅವರನ್ನು ಕರೆತಂತು.
ಕೃಷಿಗೆ ಬೇಕಾದ ಜಮೀನು ಇರಲಿಲ್ಲ. ಜಮೀನು ಕೊಳ್ಳುವಷ್ಟು ಹಣವೂ ಇರಲಿಲ್ಲ . ಸಂಬಂಧಿಯೊಬ್ಬರ ಸ್ವಲ್ಪ ಜಮೀನು ಇತ್ತು ದಾಖಲೆಗಳು ಇರಲಿಲ್ಲ.
ಅದರಿಂದಾಗಿಯೇ ಕೃಷಿ ಮಾಡಬೇಕೆಂದಿದ್ದವರಿಗೆ ಕಡಿಮೆ ಬೆಲೆಗೆ ಆ ಜಮೀನು ಕೊಟ್ಟರು. ಅಲ್ಲಿ ಉತ್ಪತ್ತಿ ಏನೂ ಇರಲಿಲ್ಲ. ಸತತ ಪರಿಶ್ರಮದಿಂದ ಮೂವತ್ತು ವರ್ಷಗಳಲ್ಲಿ ಐದು ಎಕರೆಯಷ್ಟು ತೋಟ ಮಾಡಿದರು.
ಅಡಿಕೆಗೆ ಹಳದಿ ಎಲೆ ರೋಗ ಇರುವ ಪ್ರದೇಶ. ಅದರ ಮೇಲೆ ಅವಲಂಬಿಸುವಂತಿಲ್ಲ ವಾರ್ಷಿಕ ನಾನೂರು ಸೆ .ಮೀ ಗೂ ಅಧಿಕ ಮಳೆಯಾಗುವ ಪ್ರದೇಶ. ಬೆಳೆ ಆಯ್ಕೆಗೆ ಹೆಚ್ಚೇನೂ ಅವಕಾಶವಿಲ್ಲ.
ಕಾಫಿ ಮತ್ತು ಮೆಣಸು ಜೊತೆಗೆ ಅಡಿಕೆ ಇರುವ ತೋಟ. ಆ ನಡುವೆ ಜಮೀನು ಮಂಜೂರಾತಿಗಾಗಿ ಫಾರಂ ನಂ 53 ರಲ್ಲಿ ಅರ್ಜಿ ಕೊಟ್ಟಿದ್ದರು. ಅರ್ಜಿ ಸಕ್ರಮ ಸಮಿತಿಯಿಂದ ಪಾಸಾಗಿ ತಾಲೂಕು ಆಫೀಸಿಗೆ ಬಂತು.
ಅಲ್ಲಿ ಕಡತ ಅದರಷ್ಟಕ್ಕೇ ಚಲಿಸಲ್ಲ. ಅದನ್ನು ಚಲಿಸುವಂತೆ ಮಾಡುವಷ್ಟು ಆರ್ಥಿಕ ಶಕ್ತಿ ಇವರಲ್ಲಿ ಇರಲಿಲ್ಲ. ಯಾರೋ ಸಲಹೆ ಕೊಟ್ಟರು ಸದ್ಯಕ್ಕೆ ಒಂದು ಎಕರೆ ಮಂಜೂರು ಮಾಡಿಸಿಕೋ ಮುಂದೆ ನೋಡಿದರಾಯ್ತು ಅಂತ.
ಬೇರೆ ದಾರಿ ಇರಲಿಲ್ಲ. ಹಾಗೆಯೇ ಮಾಡಿದರು. ಉಳಿದ ನಾಲ್ಕು ಎಕರೆ ತೋಟಕ್ಕೆ ಹಕ್ಕುಪತ್ರ ಇಲ್ಲ. ಈಗ ಆ ಸರ್ವೆ ನಂ ಸೊಪ್ಪಿನ ಬೆಟ್ಟ ಸೆಕ್ಷನ್ 4(1) ರಲ್ಲಿ ಸೂಚಿತವಾಗಿರುವ ಪ್ರದೇಶ. ಸರ್ಕಾರದ ದೃಷ್ಟಿಯಲ್ಲಿ ಇವರೂ ಒತ್ತುವರಿದಾರ.
ಇನ್ನೊಬ್ಬರು ಮೂಡಿಗೆರೆ ತಾಲೂಕಿನವರು. ಮೂಡಿಗೆರೆ ತಾಲೂಕಿನಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಬೇಲಿ. ಗುಡ್ಡದ ನೆತ್ತಿಯ ವರೆಗೂ ಕಾಫಿ ತೋಟಗಳು. ಶ್ರೀಮಂತ ರೈತರೊಬ್ಬರ ತೋಟದಲ್ಲಿ ಕೆಲಸಕ್ಕಿದ್ದ ಇವರು ರಸ್ತೆ ಪಕ್ಕದ ಗುಡ್ಡದ ಇಳಿಜಾರಿನಲ್ಲಿಯೇ ಸ್ವಂತಕ್ಕೊಂದು ಸೂರು ಮಾಡಿಕೊಂಡರು.
ಸುಮಾರು ನಲ್ವತ್ತು ವರ್ಷ ಹಿಂದೆಯೇ. ಕೂಲಿ ಕೆಲಸ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಸಂಸಾರ ನಡೆಸಿದರು. ಮನೆಗೆ ಮನೆಯ ಜಾಗಕ್ಕೆ ಹಕ್ಕುಪತ್ರವಿನ್ನೂ ಸಿಕ್ಕಿಲ್ಲ. ಗ್ರಾಮಪಂಚಾಯ್ತಿ ಕಂದಾಯ ಕಟ್ಟಿಸಿಕೊಳ್ಳುತ್ತೆ.
2019 ರ ಮಹಾಮಳೆಗೆ ಪಕ್ಕದ ಗುಡ್ಡ ಜಾರಿ ಇವರ ಮೆಯ ಮೇಲೆ ಬಿತ್ತು. ಸರ್ಕಾರದಿಂದ ಹೊಸಮನೆ ಕಟ್ಟಿಕೊಳ್ಳಲು ಐದು ಲಕ್ಷ ಅನುದಾನ ಸಿಕ್ತು. ಬೇರೆ ಜಾಗವೇನೂ ಸಿಗಲಿಲ್ಲ .ಅಲ್ಲಿಯೇ ಪಕ್ಕದಲ್ಲಿ ಹೊಸ ಮನೆ ಕಟ್ಟಿದ್ದಾರೆ .
ಮನೆ ಪೂರ್ಣಗೊಳಿಸಲು ಹಣ ಸಾಕಾಗಿಲ್ಲ. ಮತ್ತೊಮ್ಮೆ ಅಂತದೇ ಮಳೆ ಬಂದರೆ ಮತ್ತೆ ಮನೆಯ ಮೇಲೆ ಗುಡ್ಡ ಕುಸಿಯಬಹುದು. ಇವರಿಗೂ ಮನೆಗೆ, ಸುತ್ತಲಿನ ಅರ್ದ ಎಕರೆ ಜಾಗಕ್ಕೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ.

ಶ್ರೀಮಂತರು, ಪ್ರಭಾವಿಗಳು ಸಕಷ್ಟು ಜಮೀನು ಇದ್ದರೂ ಮತ್ತಷ್ಟು ಒತ್ತುವರಿ ಮಾಡಿ ತೋಟ ಮಾಡಿದ್ದಾರೆ. ಸಾದ್ಯವಾದಷ್ಟು ಮಂಜೂರೂ ಮಾಡಿಸಿಕೊಂಡಿದ್ದಾರೆ.
ಈ ಮಧ್ಯೆ ಒತ್ತುವರಿ ತೆರವಿನ ವಿರುದ್ದ ಹೋರಾಟ ನಡೆಯುತ್ತಿದೆ. ಸಣ್ಣ ರೈತರ ಜಮೀನಿಗೆ ಕೃಷಿ ಕಾರ್ಮಿಕರ ಮನೆಗಳಿಗೆ ಹಕ್ಕುಪತ್ರ ಸಿಗಬೇಕು. ದೊಡ್ಡ ಒತ್ತುವರಿ ತೆರವಾಗಬೇಕು ಎಂಬ ನಮ್ಮಂತವರ ಮಾತುಗಳು ಒತ್ತುವರಿ ವಿರೋಧಿ ಹೋರಾಟಗಾರರಿಗೆ ಇಷ್ಟವಾಗುವುದಿಲ್ಲ.
ಇತ್ತ ನಗರದ ಪರಿಸರ ವಾದಿಗಳಿಗೆ ಜೀವನಕ್ಕಾಗಿ ಸಾಗುವಳಿ ಮಾಡಿರುವ ಜಮೀನು ಮಂಜೂರಾಗಬೇಕೆಂಬ ಮಾತು ಒಪ್ಪಿಗೆಯಾಗುವುದಿಲ್ಲ.
ಹಳ್ಳಿ ಮೂಲೆಯಲ್ಲಿರುವ ನಮ್ಮಂತವರು ಗಾಡ್ಗೀಳ್ ವರದಿ ಓದಿಕೊಂಡಿದ್ದೇವೆ. ಅದರಲ್ಲಿರುವ ಸಾಧಕ ಬಾಧಕಗಳ ಬಗ್ಗೆ ಮಾತಾಡ್ತೇವೆ ಅಂದ್ರೆ ನಗರ ಪರಿಸರವಾದಿಗಳಿಗೆ ನಂಬಿಕೆಯೇ ಬರುವುದಿಲ್ಲ.
ಮಾಧ್ಯಮಗಳಿಗೆ ಇಂತಹ ವಿಷಯಗಳಲ್ಲಿ ಆಸಕ್ತಿ ಇಲ್ಲ. ಅಥವಾ ಅಲ್ಲಿಗೆ ಸರಿಯಾಗುವಂತೆ ಬರೆಯಲು ನಮಗೆ ಬರುವುದಿಲ್ಲ.

ಆದರೂ… ಪರಿಸರ ಸಮಸ್ಯೆಗಳನ್ನು ಪರಿಹರಿಸಬೇಕೆಂದರೆ ಜನರನ್ನು ಒಳಗೊಂಡ ಪರಿಸರ ಸಂರಕ್ಷಣಾ ಯೋಜನೆಗಳನ್ನು ರೂಪಿಸಬೇಕು.
ಅದಕ್ಕಾಗಿ ಮೊದಲು ಇಲ್ಲಿನ ಸಣ್ಣ ರೈತರ ಜಮೀನಿಗೆ ಹಕ್ಕುಪತ್ರ ನೀಡಬೇಕು ಅವರನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಎಂದೆಲ್ಲಾ ವಾದಿಸುವ ನಮ್ಮಂತವರಿಗೆ ಅದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಲು ಇರುವುದು ಸಾಮಾಜಿಕ ಮಾ ಮಾಧ್ಯಮವೊಂದೇ.
ಅಲ್ಲೂ ಇಂತಹ ಉದ್ದದ ಬರಹಗಳನ್ನು ಓದುವವರ ಸಂಖ್ಯೆ ಕಡಿಮೆಯೇ.
ಈ ಎಲ್ಲವನ್ನೂ ತಲುಪಬೇಕಾದವರಿಗೆ ತಲುಪಿಸುವ ಬಗೆ ಹೇಗೆ ? ಗೊತ್ತಿಲ್ಲ.
ಆದರೂ….
ಸುಮ್ಮನಿರಲಾಗಲ್ಲ.

ಗುರುಮೂರ್ತಿ ಜೋಗಿಬೈಲು.

Leave a Reply

Your email address will not be published. Required fields are marked *

On Key

Related Posts

ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಸಂಗಾತಿಗಳಲ್ಲಿ ಸ್ನೇಹಪೂರ್ವಕವಾದ ಅರಿಕೆ

ಸಂಗಾತಿಗಳೇ, ಇಡೀ ಭಾರತದಲ್ಲಿ ಇಂದು ಕರ್ನಾಟಕವು ಹಲವು ರೀತಿಗಳಲ್ಲಿ ತನ್ನದೇ ಆದ ವಿಶೇಷವಾದ ಛಾಪು ಮೂಡಿಸುತ್ತಿದೆ. ಹಿಂದಿನಿಂದಲೂ ಕರ್ನಾಟಕ ಹೊಂದಿರುವ