ಚಿಕ್ಕಮಗಳೂರು : ಇಲ್ಲಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದವರ ಚಿನ್ನವನ್ನು ತಕ್ಷಣ ಹಿಂದಿರುಗಿಸುವಂತೆ ರೈತ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಇಲ್ಲಿನ ಸೆಂಟ್ರಲ್ ಆಫ್ ಇಂಡಿಯಾದಲ್ಲಿ 145 ಗ್ರಾಹಕರು ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂದರು.
ಸಾಕಷ್ಟು ಗ್ರಾಹಕರು ಸಾಲವನ್ನು ತೀರಿಸಿದ್ದರೂ ಚಿನ್ನವನ್ನು ನೀಡಲು ಹಿಂದೇಟು ಹಾಕಿದಾಗ ಸಂಶಯಗೊಂಡು ಪ್ರಶ್ನಿಸಿದಾಗ ಬ್ಯಾಂಕಿನಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಬ್ಯಾಂಕಿನ ಅಂದಿನ ವ್ಯವಸ್ಥಾಪಕರು ಸೇರಿದಂತೆ ನಾಲ್ವರು ಸಿಬ್ಬಂದಿ ಸೇರಿ ಚಿನ್ನವನ್ನು ಬೇರೆ ಬ್ಯಾಂಕಿಗೆ ನಲ್ಲಿ ಅಡವಿಟ್ಟು ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದರು.
ವಂಚಿಸಿದ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಈಗಾಗಲೇ ಅವರನ್ನು ಬಂಧಿಸಲಾಗಿದೆ, ಆದರೆ ರೈತರಿಗೆ ಸಿಗಬೇಕಾದ ಚಿನ್ನ ಇನ್ನೂ ಸಿಕ್ಕಿಲ್ಲ ಎಂದರು.
ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಸಾಲ ಮರುಪಾವತಿಸಿದ ಗ್ರಾಹಕರು ಚಿನ್ನ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಬ್ಯಾಂಕ್ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಚಿನ್ನವನ್ನು ಇಟ್ಟು ಸಿಬ್ಬಂದಿ ವಂಚನೆ ಮಾಡಿದ ತಪ್ಪಿಗೆ ಗ್ರಾಹಕರು ನಷ್ಟ ಅನುಭವಿಸಬೇಕಾಗಿದೆ ಎಂದರು.
ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ದೀರ್ಘಕಾಲ ಹಿಡಿಯುತ್ತದೆ ಎಂದು ಗ್ರಾಹಕರಿಗೆ ಪರೋಕ್ಷವಾಗಿ ಹೆದರಿಕೆ ಮೂಡಿಸಿ “ಮಾತುಕತೆ” ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ವ್ಯವಸ್ಥಾಪಕರು ಹೇಳುತ್ತಿದ್ದಾರೆ ಎಂದರು.
ಒಂದು ವರ್ಷದ ಬಡ್ಡಿ ಪಾವತಿಸಿದರೆ ಮೂಲ ಚಿನ್ನದ ಬದಲು, ಗಟ್ಟಿ ಚಿನ್ನ ನೀಡುವುದಾಗಿ ಹೇಳುವ ಮೂಲಕ ಗ್ರಾಹಕರ ಮೇಲೆ ಮತ್ತಷ್ಟು ಹೊರೆಹೊರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ವಂಚನೆ ಪ್ರಕರಣದಿಂದ ಬ್ಯಾಂಕಿಗೆ ಯಾವುದೇ ರೀತಿಯ ನಷ್ಟವಿಲ್ಲದಿದ್ದು, ಅವರಿಗೆ ವಿಮೆ ಮೂಲಕ ಹಣ ಪಾವತಿ ಆಗುವುದರಿಂದ ಬಡ್ಡಿ ರಹಿತವಾಗಿ ಮೂಲ ಚಿನ್ನ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ: ಈ ನಡುವೆ ಬ್ಯಾಂಕಿಗೆ ತೆರಳಿದ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನ್ಯಾಯ ಕೊಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಂಘದ ಪದಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.