ಚಿಕ್ಕಮಗಳೂರು:ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪತ್ರ ಬರೆಯಲಾಗಿದೆ.
ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಮಾನತ್ತಿಗೆ ಒತ್ತಾಯಿಸಿ ಪತ್ರಕರ್ತರ ಸಂಘ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿಗೆ ಪತ್ರ ಬರೆದಿದೆ.
ನಾಡಹಬ್ಬ ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ವಿಜಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಎಚ್.ಕೆ. ಚಂದ್ರು ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮಾಡಿರುವುದನ್ನು ಪತ್ರಕರ್ತರ ಸಂಘ ಖಂಡಿಸಿದೆ.
ವಿಶ್ವ ವಿಖ್ಯಾತ ದಸರಾ ಉತ್ಸವದ ಯಶಸ್ವಿಗೆ ಕಳೆದ ಎರಡು ತಿಂಗಳಿನಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮದ ಪ್ರತಿನಿಧಿಗಳನ್ನು ಪೊಲೀಸ್ ಸಿಬ್ಬಂದಿ ಅಮಾನವೀಯವಾಗಿ ನಡೆಸಿಕೊಂಡಿರುವುದು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಶೋಭೆ ತರುವ ವಿಷಯವಲ್ಲ ಎಂದು ಸಂಘ ಎಚ್ಚರಿಸಿದೆ.
ಮಾಧ್ಯಮ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು ಈ ಕೃತ್ಯವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಅರಮನೆಯ ಆವರಣದಲ್ಲಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೆ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕಾಗಿ ಒತ್ತಾಯಿಸಿದೆ.
ಒಂದು ವೇಳೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಮಾಧ್ಯಮದ ಪ್ರತಿನಿಧಿಗಳು ಪ್ರತಿಭಟನೆಯ ಮೂಲಕ ನ್ಯಾಯ ಕಂಡುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಅಧ್ಯಕ್ಷ ಕೆ.ದೀಪಕ್ ತಿಳಿಸಿದ್ದಾರೆ.
ವಿಡಿಯೋ ತುಣುಕು: