ಚಿಕ್ಕಮಗಳೂರು : ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಯನ್ನು ಹೊಂದಲು ಅನರ್ಹರಾಗಿರುವ ತಾಲ್ಲೂಕಿನ ಎಲ್ಲಾ ಪಡಿತರ ಚೀಟಿದಾರರ ಕುಟುಂಬಗಳು ತಕ್ಷಣವೇ ಆಹಾರ ಶಾಖೆಗೆ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳ ನೌಕರರು ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಉಲ್ಲೇಖಿತ ಪಡಿತರ ಚೀಟಿ ಹಿಂದೆ ನೀಡುವಂತೆ ಕೋರಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ೩ ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬ ಅಥವಾ , ನಗರ ಪ್ರದೇಶಗಳಲ್ಲಿ ೧೦೦೦ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಈ ಮಾರ್ಗ ಸೂಚಿ ವ್ಯಾಪ್ತಿಗೆ ಒಳಪಡುತ್ತವೆ.
ಜೀವನೋಪಾಯಕ್ಕಾಗಿ ಸ್ವತ: ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ , ವಾರ್ಷಿಕ ಆದಾಯವು ರೂ. ೧.೨೦ ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ತಕ್ಷಣ ಉಲ್ಲೇಖಿತ ಪಡಿತರ ಚೀಟಿ ಹಿಂದೆ ನೀಡುವಂತೆ ತಿಳಿಸಲಾಗಿದೆ.
.ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅಥವಾ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ಚಿಕ್ಕಮಗಳೂರು ತಾಲ್ಲೂಕು ಕಛೇರಿಯ ಆಹಾರ ಶಾಖೆಗೆ ಪಡಿತರ ಚೀಟಿಯನ್ನು ಒಪ್ಪಿಸಲು ತಿಳಿಸಿದೆ.
ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ಕ್ರಮ ಜರುಗಿಸಲಾಗುವುದು ಹಾಗೂ ಹಂಚಿಕೆ ಪಡೆದ ಆಹಾರ ಧಾನ್ಯಗಳ ಬಾಬ್ತು ಮುಕ್ತ ಮಾರುಕಟ್ಟೆ ದರದಂತೆ ಮೊಬಲಗನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಗುವುದೆಂದು ಚಿಕ್ಕಮಗಳೂರು ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.