ಚಿಕ್ಕಮಗಳೂರು: ಉಪನಿಷತ್ತುಗಳು ಮನುಷ್ಯ ಕುಲಕ್ಕೆ ಜ್ಞಾನದೃಷ್ಟಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿ ಕೂಡ ಹೌದು. ಅವು ಮಾನವ ಜನಾಂಗಕ್ಕೆ ಬೆಳಕಿನ ಮಾರ್ಗವನ್ನು ತೋರಿಸುತ್ತವೆ ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಬ್ರಹ್ಮಸಮುದ್ರ ರಂಗಣ್ಣನ ಛತ್ರದಲ್ಲಿ ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ ಹಾಗೂ ಬ್ರಾಹ್ಮಣ ಮಹಾಸಭಾದಿಂದ ಏರ್ಪಡಿಸಿದ್ದ ಕ ಡಾ.ಬೆಳವಾಡಿ ಹರೀಶ್ ಭಟ್ಟ ವಿರಚಿತ ನೂರಾರು ಉಪನಿಷತ್ತುಗಳ ಅಧ್ಯಯನದ ಎರಡು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗವಂತನ ತತ್ವ, ಆತ್ಮನ ಸ್ವರೂಪ, ಜೀವ, ಜಗತ್ತು, ಈಶ್ವರ ಇವುಗಳ ನಡುವಿನ ಸಂಬಂಧದ ಸತ್ಯವನ್ನು ತಾತ್ವಿಕವಾಗಿ, ಅತ್ಯಂತ ಅರ್ಥಪೂರ್ಣವಾಗಿ, ರಚನಾತ್ಮಕವಾಗಿ, ಯೋಜನಾ ಬದ್ಧವಾಗಿ ಮನುಷ್ಯನ ಅಂತರಂಗಕ್ಕೆ ಬರುವಂತೆ ಉಪನಿಷತ್ತುಗಳು ಬಿಚ್ಚಿಡುತ್ತವೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿರುವ ದರ್ಶನ ಶಾಸ್ತ್ರಗಳಲ್ಲಿ ಉಪನಿಷತ್ತನ್ನು ಒಳಗೊಂಡಿರುವ ಉತ್ತರ ಮೀಮಾಂಸೆ ದಕ್ಷಿಣ ಶಾಸ್ತ್ರವು ಅಗ್ರಸ್ಥಾನದಲ್ಲಿದೆ. ಹಿರಿಯರ ಪ್ರಕಾರ ಮನುಷ್ಯನ ಬೌದ್ಧಿಕ ವಿಕಾಸವು ಯಾವಾಗ ಅಂತಿಮ ಸ್ಥಿತಿಯನ್ನು ತಲುಪುತ್ತದೆಯೋ ಆಗ ಉಪನಿಷತ್ತಿನ ಸತ್ಯಗಳು ಅಂತರಂಗದಲ್ಲಿ ಸ್ಫುರಣೆಯನ್ನು ಕಾಣುತ್ತವೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಸಾವಿನ ನಂತರ ನಮಗೆ ಬದುಕು ಇದೆಯೇ? ಇಲ್ಲವೇ? ಎನ್ನುವ ಜಿಜ್ಞಾಸೆ ಇರುತ್ತದೆ. ಮರಣದಾಚೆಯ ಬದುಕಿನಲ್ಲಿ ನಮಗೆ ಅಸ್ತಿತ್ವ ಇದೆ. ಬದುಕಿನ ಪಯಣಕ್ಕೆ ಪೂರ್ಣ ವಿರಾಮವಿಲ್ಲ. ದೇಹತ್ಯಾಗ ಎನ್ನುವುದು ಅಲ್ಪವಿರಾಮ ಮಾತ್ರ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಮಾತನಾಡಿ, ಜ್ಞಾನದ ತತ್ವ ನೀಡುವ ಉಪನಿಷತ್ತುಗಳು ಮನುಷ್ಯನ ಬದುಕಿನ ಒಳಾರ್ಥಗಳನ್ನು ಭೂಮಿಯ ಹುಟ್ಟು, ಜೀವಸಂಕುಲದ ಹುಟ್ಟಿನ ಬಗ್ಗೆ ತಿಳಿಸುತ್ತವೆ ಎಂದರು.
ಇದುವರೆಗೂ ೧೦ ಉಪನಿಷತ್ತುಗಳನ್ನು ಮಾತ್ರ ಓದಿದ್ದ ನಮ್ಮ ಮುಂದೆ ೧೫೦ ಉಪನಿಷತ್ತುಗಳನ್ನು ಡಾ.ಹರೀಶ್ ಭಟ್ಟರು ತೆರೆದಿಟ್ಟಿದ್ದಾರೆ. ಅವುಗಳನ್ನು ಅವರು ದೇಶ-ವಿದೇಶಗಳಿಂದ ಸಂಗ್ರಹ ಮಾಡಿದ್ದಾರೆ. ಕನ್ನಡದಲ್ಲಿ ವಿವರವಾದ ಅರ್ಥವನ್ನು ನೀಡಿ ಜನಸಾಮಾನ್ಯರು ತಿಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ತಿಳಿಸಿದರು
ಸಂಪುಟಗಳನ್ನು ಪರಿಚಯಿಸಿದ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಮಾತನಾಡಿ ಉಪನಿಷತ್ತುಗಳು ಋಷಿಗಳ ದಾರ್ಶನಿಕತೆ. ಅವುಗಳಲ್ಲಿ ಒಂದೇ ಒಂದು ಸುಳ್ಳಿಲ್ಲದ್ದರಿಂದ ಇವತ್ತಿನವರೆಗೂ ಉಳಿದಿವೆ. ಹರೀಶ ಭಟ್ಟರು ಆ ಸತ್ಯದ ಜೊತೆ ಅನುಸಂಧಾನ ಮಾಡಿದ್ದಾರೆ ಎಂದರು.
ಕೃತಿಗಳ ಕರ್ತೃ ಡಾ.ಹರೀಶ ಭಟ್ಟರು ಮಾತನಾಡಿದರು.
ಕಾಫಿ ಬೆಳೆಗಾರ ಎಂ.ಆರ್.ಗುರುಮೂರ್ತಿ,ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಉದ್ಭವ ಪ್ರಕಾಶನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಚ್.ನಟರಾಜ್ ಹಾಗೂ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿದರು.
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಪ್ರಾಸ್ತಾವಿಕ ಮಾತನಾಡಿದರು. ಡಾ.ಹರೀಶ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್ ಸ್ವಾಗತ, ಸಾಹಿತಿ ಡಾ.ಬೆಳವಾಡಿ ಮಂಜುನಾಥ ನಿರೂಪಣೆ, ಸಾಂಸ್ಕೃತಿಕ ಸಂಘದ ಆನಂದ ಕುಮಾರಶೆಟ್ಟಿ ವಂದನಾರ್ಪಣೆ ನೆರವೇರಿಸಿದರು.