ಚಿಕ್ಕಮಗಳೂರು : ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳಿಗೆ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಗಳ ಮೋರ್ಚಾದ ನೇತೃತ್ವದಲ್ಲಿ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ
ರಾಜ್ಯದಲ್ಲಿ ಕಾಂಗ್ರೆಸ್‌ನ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿದ್ದು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡರೆ ಯಾವುದೇ ಜಿಲ್ಲೆ ಅಥವಾ ತಾಲ್ಲೂಕಿಗೆ ಸರ್ಕಾರ ಅನುದಾನ ನೀಡಿಲ್ಲ ಎಂದು ಟೀಕಿಸಿದರು.
ಜನಸಾಮಾನ್ಯರ ಬದುಕಿನಲ್ಲಿ ಆಟವಾಡುವ ಜೊತೆಗೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಕರಣ ದಾಖಲಿಸುವುದು, ಸಂಘಟನೆ ಮುಖಂಡರನ್ನು ಅವಮಾನಿಸಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ ಹಿಂದುಳಿದ ವರ್ಗವೆಂದು ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು, ಹಿಂದುಳಿದ ಸಮುದಾಯಕ್ಕೆ ದ್ರೋಹವೆಸಗಿದೆ. ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನಿರೀಕ್ಷೆಯಲ್ಲಿದ್ದ ಜನಾಂಗಕ್ಕೆ ಬಹಳಷ್ಟು ನಿರಾಸೆಯಾಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ರಾಜಕೀಯ ಹಾಗೂ ಆರ್ಥಿಕವಾಗಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಒಂದೆಡೆ ಸ್ವಪಕ್ಷವು ಅಧಿಕಾರದಿಂದ ಕೆಳಗಿಳಿಸಲು ಮುಂದಾದರೆ, ಗ್ಯಾರಂಟಿ ಯೋಜನೆಗೆ ಹಣ ಕ್ರೂಢೀ ಕರಿಸುವಲ್ಲಿ ಮುಖ್ಯಮಂತ್ರಿಗಳು ವಿಫಲತೆ ಹೊಂದಿದ್ದಾರೆ ಎಂದರು.
ಪ್ರತಿಭಟನೆ ನೇತೃತ್ವ ವಹಿಸಿ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಕಪ್ಪ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಬ್ಯಾಟರಿ, ಮಣೇನ ಹಳ್ಳಿ ರಾಜು, ಯೋಗೀಶ್ ಪೂಜಾರಿ, ನಗರ ಮಂಡಲ ಅಧ್ಯಕ್ಷ ಸಿ.ಟಿ.ಜಯವರ್ಧನ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಉಪಸ್ಥಿತರಿದ್ದರು