ಚಿಕ್ಕಮಗಳೂರು: ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕಲಿಕೆಗೆ ಪ್ರೋತ್ಸಾಹಿಸಬೇಕು. ಅಕ್ಷರ ಅಭ್ಯಾಸದ ಜೊತೆಗೆ ಜೀವನ ಮೌಲ್ಯಗಳ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಸ್.ಮಂಜು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ತೇಗೂರು ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೇಶದ ಆಸ್ತಿ. ಅವರಿಗೆ ಉತ್ತಮ ವಾತವರಣದಲ್ಲಿ ನೈತಿಕ ಪಾಠಗಳನ್ನು ಉಣಬಡಿಸಿ ಉತ್ತಮ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಆತ್ಮಸ್ಥೈರ್ಯವಾಗಿದ್ದಾರೆ ಎಂದರು.
ಮಕ್ಕಳ ಅವಶ್ಯಕತೆಗಳನ್ನು ಅರಿತು ಯಾವುದೇ ಮೂಲ ಅಗತ್ಯತೆಗಳ ಕೊರತೆಯಾಗದಂತೆ ನಿಗಾವಹಿಸಿ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕಗಳಿಗಿಂತ ಮೊಬೈಲ್‌ಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಕಾಲಾಹರಣ ಮಾಡುವುದಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು ೧೫,೫೭೨ ಮಕ್ಕಳು ಸೈಬರ್ ಅಪರಾಧಕ್ಕೆ ಒಳಗಾಗಿದ್ದಾರೆ ಇದು ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರುತ್ತಿದೆ.ರಾಜ್ಯಾದ್ಯಂತ ಸುಮಾರು ೧೪,೦೦೦ ಮಕ್ಕಳು ಶಾಲೆಯಿಂದ ಹೊರಗುಳಿದ್ದಿದಾರೆ ಹಾಗೂ ೨೪೯೭ ಮಕ್ಕಳು ಮಾದಕ ವಸ್ತುಗಳ ಬಳಕೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ ಎಂದು ವಿಷಾದಿಸಿದರು
ಮಕ್ಕಳಲ್ಲಿ ತಮ್ಮ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ಮಾಹಿತಿ ಇರಬೇಕು. ಯಾವುದೇ ವ್ಯಕ್ತಿಯಿಂದ ಲೈಗಿಂಕ ದೌರ್ಜನ್ಯಕ್ಕೆ ಒಳಗಾಗದಂತೆ ತಪ್ಪಿಸಲು ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಪ್ರಜ್ಞೆ ಇರಬೇಕು. ರಾಜ್ಯದಲ್ಲಿ ಒಟ್ಟು ೧೦.೨೪೭ ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ ಹಾಗೂ ದೌರ್ಜನ್ಯ ಎಸಗುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕ್ರಮವಹಿಸಲಾಗುತ್ತಿದೆ ಎಂದರು.
ಅವರು ಮಕ್ಕಳು ತಮಗಿರುವ ಕಾನೂನು ಕ್ರಮಗಳು ಮತ್ತು ಹಕ್ಕುಗಳ ಅರಿತು ಶಿಕ್ಷಣವಂತರಾಗಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶ್ವಥ್ ಬಾಬು, ಜಿಲ್ಲಾ ಕಾರ್ಮಿಕ ಅಧಿಕಾರಿ ಸುರೇಶ್ ಬಿ.ಸಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ ಹೆಚ್.ಸಿ, ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಪ್ರಾಂಶುಪಾಲೆ ಸಂಧ್ಯಾ ಕೆ.ಎಂ. ಪಾಲ್ಗೊಂಡಿದ್ದರು.