ಚಿಕ್ಕಮಗಳೂರು: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿ ಇಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಚಿಕ್ಕಮಗಳೂರು ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ.ಮಾರ್ಸೆಲ್ ಪಿಂಟೊ ಹೇಳಿದರು. ಮೂಡಿಗೆರೆತಾಲೂಕಿನ ಬಣಕಲ್ ನಜರೆತ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕಾರ,ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಮುಂದೆ ಅವರು ಬುದ್ದಿ ಶಕ್ತಿ, ಜ್ಞಾನ,ವಿವೇಕದಿಂದ ನಡೆದು ಉತ್ತುಂಗ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಳೆ ವಿದ್ಯಾರ್ಥಿ ಹಾಗೂ ವೈದ್ಯ ಡಾ.ಶಬರೀಶ್ ಮಾತನಾಡಿ ಜೀವನದ ಉತ್ತಮ ಮೌಲ್ಯಗಳನ್ನು ಈ ಶಾಲೆ ನನಗೆ ಕಲಿಸಿಕೊಟ್ಟಿದೆ.ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆಎಂದರು.
ಬಣಕಲ್ ಬಾಲಿಕಾ ಮರಿಯ ಚರ್ಚಿನ ಸಹಾಯಕ ಗುರುಗಳಾದ ಫಾ.ಥಾಮಸ್ ಕಲಘಟಗಿ , ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ, ಪಿಟಿಎ ಸದಸ್ಯೆ ಅನಿತಾ ಮಾತನಾಡಿದರು. ಪರಿಸರ ಉಳಿಸುವ ಬಗ್ಗೆ ಮಕ್ಕಳು ನೃತ್ಯ, ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನೋರಂಜಿಸಿದರು.
