ಮಲೆನಾಡಿನಲ್ಲಿ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ವೇದಿಕೆಗಳನ್ನೇರುವ ರಾಜಕಾರಣಿಗಳು “ಉಗ್ರ”ಭಾಷಣಗಳ ಮೂಲಕ ಚಪ್ಪಾಳೆ ಗಿಟ್ಟಿಸುತ್ತಾರೆ. ಜೀವನ ನಡೆಸುವ ಅನಿವಾರ್ಯತೆಗೆ ಒಂದಷ್ಟು ಜಾಗ ಸಾಗುವಳಿ ಮಾಡಿ ಸರ್ಕಾರ ಹೇಳಿದಾಗಲೆಲ್ಲ ವಿವಿಧ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಲೇ ತಲೆ ಹಣ್ಣಾಗಿ ದಾರೆ.
ತಾವು ಕಟ್ಟಿಕೊಂಡು ವಾಸವಾಗಿರುವ ಮನೆಗೆ ಹಕ್ಕುಪತ್ರ ಸಿಗಬಹುದೇನೋ ಎಂದು ಅರ್ಜಿ ಕೊಟ್ಟು ಕಾಯುತ್ತಿರುವ ಭೂರಹಿತ ಕೃಷಿ ಕಾರ್ಮಿಕರು ಒತ್ತುವರಿ ತೆರವಿನ ಭೀತಿಯಿಂದ ಪ್ರತಿಭಟನಾ ಸಭೆಗಳಿಗೆ ಬರುತ್ತಾರೆ.
ಜೀವನ ನಡೆಸಲು ಸಾಕಷ್ಟು ಜಮೀನು ಇದ್ದೂ ಗುಡ್ಡದ ತುದಿಯೋ.. ಹೊಳೆಯೋ.. ರಸ್ತೆಯೋ.. ಸಿಗುವ ವರೆಗೂ ತೋಟ ವಿಸ್ತರಿಸಿರುವ ಪ್ರಭಾವಿಗಳು ಗಲಾಟೆ ಜೋರಾಗಿ ನಡೆದು ಒತ್ತುವರಿ ತೆರವು ನಿಲ್ಲಲಿ ಎಂದು ಹಾರೈಸುತ್ತಾ.. ರೈತರೆಲ್ಲ ಒಂದೇ…. ಎಂಬ ಮಂತ್ರದೊಂದಿಗೆ ಸಭೆಗಳಲ್ಲಿ ಠಳಾಯಿಸುತ್ತಾರೆ.
ಪ್ರತಿಭಟನೆಯ ಕಾವು ಏರಿದಂತೆ “ಸದ್ಯಕ್ಕೆ “ಒತ್ತುವರಿ ತೆರವು ನಿಲ್ಲುತ್ತದೆ. ಯಥಾಸ್ಥಿತಿ ಮುಂದುವರಿಯುತ್ತದೆ.
ಅದಷ್ಟೇ ಸಾಕೆ ? ಮಲೆನಾಡಿನ ಸಮಸ್ಯೆಗೆ ಇದು ಪರಿಹಾರವೇ? ಯೋಚಿಸಬೇಕಿದೆ.
ಮಲೆನಾಡಿನ ಒತ್ತುವರಿ ಸಂಬಂಧಿಸಿದ ಸಮಸ್ಯೆ ಗಳು ಬಗೆಹರಿಯಬೇಕೆಂದರೆ….
*ರೆವಿನ್ಯೂ ಮತ್ತು ಅರಣ್ಯ ಭೂಮಿಗಳ ವಿಂಗಡಣೆಯನ್ನು ಪುನರ್ ಪರಿಶೀಲಿಸಿ ವಾಸ್ತವಿಕ ನೆಲೆಗಟ್ಟಿನಲ್ಲಿ ವಿಂಗಡಿಸಬೇಕು.
*ಜೀವನೋಪಾಯಕ್ಕಾಗಿ ಮಾಡಿರುವ ಎಲ್ಲಾ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಬೇಕು.
*ಮನೆಕಟ್ಟಿಕೊಂಡು ವಾಸವಾಗಿರುವ ಪ್ರತಿ ಕುಟುಂಬಕ್ಕೂ ಮನೆಗೆ ಹಕ್ಕುಪತ್ರ ನೀಡಬೇಕು.
*ಅದಕ್ಕಾಗಿ ಕಾನೂನು ತಿದ್ದುಪಡಿ ಮಾಡಬೇಕು.
ಅಲ್ಲದೆ…
ಮಲೆನಾಡು ಉಳಿಯಬೇಕೆಂದರೆ…
ಅನಿಯಂತ್ರಿತ ಒತ್ತುವರಿಗೆ ಕಡಿವಾಣ ಹಾಕಬೇಕು.
*ಅಗತ್ಯ ಸಾಗುವಳಿ ಜಮೀನುಗಳಿಗೆ ಹಕ್ಕುಪತ್ರ ನೀಡಿದ ನಂತರ ಉಳಿದೆಲ್ಲಾ ಜಾಗಗಳನ್ನು ಅರಣ್ಯ ಎಂದು ಘೋಷಿಸಬೇಕು.
*ಬಲಾಢ್ಯರು ಮಾಡಿರುವ ಒತ್ತುವರಿಗಳನ್ನು ತೆರವುಗೊಳಿಸಿ ಅರಣ್ಯಕ್ಕೆ ಸೇರಿಸಬೇಕು.
*ಅರಣ್ಯ ಇಲಾಖೆ ಕಾಡನ್ನು ಒತ್ತುವರಿ ಮಾಡಿ ಬೆಳಸಿರುವ ನೆಡುತೋಪುಗಳನ್ನು ತೆರವುಗೊಳಿಸಿ ಸಹಜ ಅರಣ್ಯ ಬೆಳಸಬೇಕು.
*ಅರಣ್ಯ ಇಲಾಖೆಯ ಅಧಿಪತ್ಯ ಕೊನೆಗೊಳಿಸಿ ಜನರನ್ನು ಒಳಗೊಂಡ ಪರಿಸರ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಸಮಗ್ರ ಪರಿಸರ ಇಲಾಖೆಯೊಂದನ್ನ ಸ್ಥಾಪಿಸಬೇಕು.
*ವಿನಾಶಕಾರೀ ಅಭಿವೃದ್ಧಿ ಗೆ ಕಡಿವಾಣ ಹಾಕಿ ವೈಜ್ಞಾನಿಕ ಅಭಿವೃದ್ಧಿ ಜಾರಿಗೊಳಿಸಬೇಕು.
*ಹವಾಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಯೋಜನೆ ರೂಪಿಸಬೇಕು.
ಈ ಎಲ್ಲವನ್ನೂ ಸಾಧಿಸಲು ಸರ್ಕಾರವನ್ನು ಒತ್ತಾಯಿಸಲು ರೈತ , ಪ್ರಗತಿಪರ , ದಲಿತ , ಕಾರ್ಮಿಕ ಸಂಘಟನೆಗಳು ಎಲ್ಲವನ್ನೂ ಒಳಗೊಂಡ ಹೋರಾಟ ಒಕ್ಕೂಟವೊಂದನ್ನು ರಚಿಸಬೇಕು.
ಇದು ಸಾಧ್ಯವಾದಿತೇ ? ರಾಜಕೀಯ ಹಿತಾಸಕ್ತಿಗಳು ಇದಕ್ಕೆ ಅವಕಾಶ ಮಾಡಿಕೊಡುವವೇ? ಎಂಬುದರ ಮೇಲೆ ಮಲೆನಾಡಿನ ಭವಿಷ್ಯ ನಿರ್ಧಾರವಾಗಲಿದೆ.
ಮಲೆನಾಡಿನ ಉಳಿವಿಗಾಗಿ ರಾಜಿರಹಿತ ಹೊರಾಟವೊಂದು ಸಾಧ್ಯವಾಗಲಿ ಎಂದು ಆಶಿಸೋಣ.
ಬರಹ : ಗುರುಮೂರ್ತಿ ಜೋಗಿ ಬೈಲು