ಚಿಕ್ಕಮಗಳೂರು: ಇತ್ತೀಚಿಗೆ ಕೊಲ್ಕತ್ತಾದಲ್ಲಿ ನಡೆದ ಘಟನೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇನ್ನರ್ ವೀಲ್ ಕ್ಲಬ್ ಆಶಯದಲ್ಲಿ ಆ.24 ರಂದು ಚಿಕ್ಕಮಗಳೂರಿನಲ್ಲಿ ಮೌನ ಮೆರವಣಿಗೆ ನಡೆಯಲಿದೆ.
ಅಂದು ಬೆಳಿಗ್ಗೆ 11 ಕ್ಕೆ ಹನುಮಂತಪ್ಪ ವೃತ್ತದಿಂದ ಹೊರಡುವ ಮೆರವಣಿಗೆ ಆದಾದ್ ಮೈದಾನ ತಲುಪಲಿದ್ದು ಅಲ್ಲಿ ಬೀದಿ ನಾಟಕ ಏರ್ಪಡಿಸಲಾಗಿದೆ. ಸಹಿ ಸಂಗ್ರಹ ಚಳವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕ್ಲಬ್ಬಿನ ಪದಾಧಿಕಾರಿಗಳಾದ ಕವಿತಾ ನಿಯತ್ , ಸಂಗೀತ ಕಾಮತ್ , ಶರ್ಮಿಳಾ ಶಶಿಧರ್ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಲ್ಕತ್ತಾದಲ್ಲಿ ನಡೆದಿರುವ ಘಟನೆ ತಲೆತಗ್ಗಿಸುವಂತೆ ಆಗಿದೆ. ಅಭಯ -ನಿರ್ಭಯ ಘೋಷಣೆಗಳ ಅಗತ್ಯವಿಲ್ಲ ಬದಲಾಗಿ ಮಹಿಳೆಯರು ನಿರ್ಭಯವಾಗಿ ತಿರುಗಾಡುವ ವಾತಾವರಣ ನಿರ್ಮಾಣ ಆಗಬೇಕಿದೆ ಎಂದರು.
ಬಹಳಷ್ಟು ಪ್ರಕರಣಗಳಲ್ಲಿ ನಿರೀಕ್ಷಿತ ನ್ಯಾಯ ಸಿಗುತ್ತಿಲ್ಲ, ನ್ಯಾಯಾಲಯಗಳಲ್ಲಿನ ವಿಳಂಬ ದೊಡ್ಡ ಹಿನ್ನಡೆ, ಸಮಾನತೆ ಎನ್ನುವುದು ಬಾಯಿ ಮಾತಿನಲ್ಲಿ ಆಗುತ್ತಿದೆ ಎಂದು ವಿಷಾದಿಸಿದರು.
ಮನಸ್ಸಿನ ಭಾವನೆಯನ್ನು ಮೌನದ ಮೂಲಕ ಅಭಿವ್ಯಕ್ತಿ ಪಡಿಸುತ್ತಿದ್ದೇವೆ, ಯಾರಿಗೂ ಆಸಕ್ತಿ ಇಲ್ಲದಿದ್ದು ರಾಜಕಾರಣಿಗಳಿಗೆ ಕುರ್ಚಿಯದೇ ಚಿಂತೆಯಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬೀದಿಗೆ ಇಳಿಯುವುದು ಅನಿವಾರ್ಯವಾಗಿದೆ ಎಂದರು.
ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುವ ನಿಟ್ಟಿನಲ್ಲಿ ಸರ್ಕಾರಗಳು ಮುತುವರ್ಜಿ ವಹಿಸಿ ಮಹಿಳೆಯರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ ಎಂದು ಹೇಳಿದರು.