ನಾಲಗೆ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡನ್ನೂ ಮಾಡಿದೆ ಮತ್ತು ಮಾಡುತ್ತದೆ.
ಯಾವುದೇ ದೇಶದ ಪ್ರಧಾನಿಯೊಬ್ಬ “ನಾಲಗೆ” ಹರಿಬಿಟ್ಟರೆ ದೇಶದೇಶಗಳ ನಡುವೆ ಯುದ್ಧವೇ ನಡೆದು ಮಾರಣ ಹೋಮವೇ ನಡೆದ ಉದಾಹರಣೆ ಇವೆ.
“ನಾಲಗೆಗೆ” ಮೂಳೆ ಇಲ್ಲ; ಆದರೆ ತಪ್ಪು ಮಾತನಾಡುವ ಮೂಲಕ ಮೂಳೆ ಮುರಿಯುವ ಮತ್ತು ಮುರಿಸುವ ಶಕ್ತಿ ಇದೆ.
ನೆರೆಹೊರೆಯವರನ್ನು, ಸಂಬಂಧಿಕರನ್ನು, ರಾಜಕಾರಣಿಗಳು ಸೇರಿದಂತೆ ಅತ್ತೆಸೊಸೆ ನಾದಿನಿ ಜಗಳದಿಂದ ಹಿಡಿದು ಅಣ್ಣತಮ್ಮಂದಿರನ್ನು ವಿಭಾಗಿಸುವುದೇ “ನಾಲಗೆ”,
ನಕಲಿ ಜೋತಿಷ್ಯ, ಪೊಳ್ಳು ಭವಿಷ್ಯ, ಮೌಢ್ಯದ ಮಂತ್ರಗಳು, ಸುಳ್ಳು ಮೋಸದ ಮಾತು, ದ್ವೇಷದ ಭಾಷಣ ಎಲ್ಲವೂ ನಾಲಗೆಯದ್ದೇ ಕೆಲಸ,
ದೇವರು ಧರ್ಮದ ಹೆಸರಲ್ಲಿ ನಡೆಯುವ ಕೋಮು ಗಲಭೆ ಮತ್ತು ರಾಜಕೀಯ ನಡೆಯುತ್ತಿರುವುದು ನಾಲಗೆ ಮೇಲೆನೇ.
ಸತ್ಯ ಸುಳ್ಳುಗಳನ್ನು ಮಿಕ್ಸ್ ಮಾಡಿ ಅಪ ಪ್ರಚಾರಗಳನ್ನೆಲ್ಲಾ ಅರೆದು, ನ್ಯಾಯ-ಸತ್ಯಗಳನ್ನು ತುರಿದು, ತುಳಿದು, ಬದುಕುತ್ತಿರುವ ಕೆಲವು ಟಿವಿ ನಿರೂಪಕರ ಬೀಕರ “ನಾಲಗೆಗಳು” ಭಯಾನಕ ಮತ್ತು ಆತಂಕಕಾರಿ.
ಇಂಪಾದ ಸಂಗೀತ, ಜನಪರ ಸಾಹಿತ್ಯದ ನುಡಿಗಳು, ಬುದ್ಧ ಬಸವಣ್ಣ ಅಂಬೇಡ್ಕರ್ ಗಾಂಧೀಜಿ ಮತ್ತು ಅನೇಕ ಮಾನವೀಯ ಸಂತರು ಶರಣರು ದಾಸರು ದಾರ್ಶನಿಕರು ಮತ್ತು ಇವರ ಬೆಂಬಲಿಗರ ನಾಲಗೆಗಳಿಂದ ಬರುವ ಮಾತುಗಳು ಮಾತ್ರ ಬಿರುಗಾಳಿಯ ಬದಲಿಗೆ ತಂಗಾಳಿಯನ್ನೇ ಸೂಸುತ್ತಾ; ಉರಿ ಬಿಸಿಲಲ್ಲೂ ಶಾಂತಿ ಸೌಹಾರ್ದತೆ ಸಹಿಷ್ಣುತೆಯಿಂದ ಎಲ್ಲರಿಗೂ ಲೇಸನ್ನೇ ಬಯಸುವ, ಲವ್ವನ್ನೇ ಬೆಸೆಯುವ ತಂಪಾದ “ನಾಲಗೆಗಳು” ನಿಜವಾದ ಆಯುಧಗಳು..
ಆಯುಧಗಳೆಂದರೆ ಕಂದ್ಲಿ ಕುಡ್ಲು ಕೊಡಲಿ ವಾಹನ ಮಿಷಿನರಿಗಳಷ್ಟೇಯಲ್ಲ;; ನಾಲಗೆಯೂ ಆಯುಧವೇ.. ಅದು ತಣ್ಣಗಿರಲಿ,
ಮನಸುಳಿ ಮೋಹನ್