ಚಿಕ್ಕಮಗಳೂರು : ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹುಮುಖ್ಯ. ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡಿಪಾಗಿಟ್ಟ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಚಿಕ್ಕಮಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಸ್ಮಾರಕ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ದೇಶದ ರಕ್ಷಣೆ, ಜನರ ನೆಮ್ಮದಿಗಾಗಿ ಹಾಗೂ ಉತ್ತಮ ಆಡಳಿತ ಕಟ್ಟಿಕೊಡುವಲ್ಲಿ ಪೊಲೀಸರು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ನಮ್ಮ ರಕ್ಷಣೆ ಮಾಡುವ ಸಂದರ್ಭದಲ್ಲಿ ಹೋರಾಡಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಅನೇಕ ಅಪರಾಧ ಚಟುವಟಿಕೆಗಳು, ಸಂಘರ್ಷಗಳು ನಡೆಯುತ್ತಿದ್ದು ಕರ್ತವ್ಯ ನಿರತ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ, ನಮ್ಮ ಸಂವಿಧಾನ ಹಾಗೂ ಕಾಯ್ದೆ, ಕಾನೂನುಗಳು ಪ್ರತಿಯೊಬ್ಬರು ಅರಿತು ಪಾಲಿಸಿದ್ದೆ ಆದಲ್ಲಿ ಸಂಘರ್ಷ ಮತ್ತು ಅಪರಾಧಗಳನ್ನು ತಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ ಮಾನವ ಮತ್ತು ಸಮಾಜದ ನಡುವಿನ ಸಂಘರ್ಷದಿಂದಾಗಿ ಪೊಲೀಸ್ ಹುತಾತ್ಮರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ, ಈ ವರ್ಷ ತಮ್ಮ ಕಾರ್ಯದಲ್ಲಿ ಶೂರತನದಿಂದ ಹೋರಾಡಿ ದೇಶದಾದ್ಯಂತ ೨೧೬ ಜನ ಪೊಲೀಸರು ತಮ್ಮ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ. ಜೆ, ನಗರ ಸಭೆ ಉಪಾಧ್ಯಕ್ಷೆ ಅನುಮಧುಕರ್ ಉಪಸ್ಥಿತರಿದ್ದರು.