ಚಿಕ್ಕಮಗಳೂರು: ಇಲ್ಲಿನ ನಗರ ಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಜಾತಾ ಶಿವಕುಮಾರ್ ,ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆಯಾದರು.
ನಗರಸಭೆ ಆವರಣದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ 25-10 ಮತಗಳ ಅಂತರದಿಂದ ಜಯಗಳಿಸಿದರು
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕರಾದ ಸಿ.ಟಿ ರವಿ ,ಎಸ್ .ಎಲ್. ಭೋಜೇಗೌಡ , ಎಚ್. ಡಿ .ತಮ್ಮಯ್ಯ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ಸಾಂಕೇತಿಕವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.
ನಿಗದಿತ ಅವಧಿಗೆ ರಾಜೀನಾಮೆ ಕೊಡದೆ ಬಂಡಾಯ ಸಾರಿ ಪೂರ್ಣಾವಧಿ ಮುಗಿಸಿದ್ದ ವರಸಿದ್ಧಿ ವೇಣುಗೋಪಾಲ್ ನಿಲುವು ಕುತೂಹಲ ಮೂಡಿಸಿದ್ದರೂ ಅಂತಿಮವಾಗಿ ಪಕ್ಷ ನೀಡಿದ್ದ ವಿಪ್ ಹಿನ್ನೆಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ಮತ ಚಲಾಯಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಸಾರಥಿಗಳನ್ನು ಅಭಿನಂದಿಸಲು ನೂಕು ನುಗ್ಗಲು ಉಂಟಾಯಿತು.
ಅಧಿಕಾರ ಹಂಚಿಕೆ ಮೂರು ಅವಧಿಗೆ ನಿಗದಿಯಾಗಿದ್ದು, ಜನಸ್ನೇಹಿ ಆಡಳಿತ ನೀಡುವ ಭರವಸೆಯನ್ನು ಅಧ್ಯಕ್ಷ – ಉಪಾಧ್ಯಕ್ಷರು , ಶಾಸಕರು ನೀಡಿದರು.
ಪರಿಚಯ:
ಅಧ್ಯಕ್ಷೆ ಸುಜಾತಾ ಶಿವಕುಮಾರ್:
ನಗರಸಭೆಯ ೬ ನೇ ವಾರ್ಡಿನಿಂದ ಸದಸ್ಯರಾಗಿ ಆಯ್ಕೆಯಾಗಿರುವ ಸುಜಾತಾ ಶಿವಕುಮಾರ್ ಬಿಜೆಪಿಯ ಹಿರಿಯ ಕಾರ್ಯಕರ್ತೆ.
ಕುರುಬ ಸಮುದಾಯದ ಸುಜಾತಾ ಶಿವಕುಮಾರ್ ಕನಕ ಮಹಿಳಾ ಮಂಡಳಿ, ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರೋಟರಿ ಸಂಸ್ಥೆಯ ಸದಸ್ಯರಾಗಿದ್ದಾರೆ.
ಮೊದಲ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷ ಪದವಿ ಅಲಂಕರಿಸಿದ್ದಾರೆ.
ಅನುಮಧುಕರ್:
ನಗರಸಭೆಯ ೧೪ನೆಯ ವಾರ್ಡಿನ ಸದಸ್ಯರಾಗಿರುವ ಅನುಮಧುಕರ್ ಭಾವಸಾರ ಕ್ಷತ್ರಿಯ ಸಮಾಜಕ್ಕೆ ಸೇರಿದವರು.
೨೦೧೪ ರಲ್ಲಿ ಮೊಟ್ಟ ಮೊದಲ ಬಾರಿ ನಗರಸಭೆಗೆ ೧೩ನೆಯ ವಾರ್ಡಿನಿಂದ ಸದಸ್ಯರಾಗಿ ಆರಿಸಿ ಬಂದಿದ್ದರು.
ಈಗ ಎರಡನೆಯ ಬಾರಿ ಸದಸ್ಯರಾಗಿ ಆರಿಸಿ ಬಂದಿದ್ದು ಭಾವಸಾರ ಕ್ಷತ್ರಿಯ ಸಮಾಜದ ಸಕ್ರಿಯ ಸದಸ್ಯರಾಗಿ ಸಮಾಜದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ಸಮಾಜದ ಗಮನ ಸೆಳೆದಿದ್ದಾರೆ.