ಚಿಕ್ಕಮಗಳೂರು: ವಿದ್ಯಾರ್ಥಿಗಳ ಎದುರು ನಿರಂತರವಾಗಿ ಜಗಳವಾಡಿಕೊಂಡು ಪಾಠ ಪ್ರವಚನ ಮಾಡದೆ ಕರ್ತವ್ಯ ಲೋಪವೆಸಗಿದ ಮೂವರು ಶಿಕ್ಷಕಿಯರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತ್ತು ಮಾಡಿತ್ತು.
ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹೊಡೆದಾಡಿಕೊಂಡ ಬಗ್ಗೆ ಪೋಷಕರು ಮತ್ತು ಗ್ರಾಮಸ್ಥರ ದೂರು ಆಧರಿಸಿ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜ್ ಅಮಾನತುಗೊಳಿಸಿ ಆದೇಶಿಸಿದ್ದರು ಎನ್ನಲಾಗಿದೆ.
ಆದರೆ ಈಗರಾಜಕೀಯ ಒತ್ತಡದಿಂದ ಡಿಡಿಪಿಐ ಅವರ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಕಿರುಗುಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಈ ಶಾಲೆಯಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈಗ 34 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಮೂವರು ಶಿಕ್ಷಕಿಯರು ಹಾಗೂ ಓರ್ವ ಅತಿಥಿ ಶಿಕ್ಷಕಿ ಶಾಲೆಯಲ್ಲಿದ್ದಾರೆ ಎಂದು ಮನವರಿಕೆ ಮಾಡಲಾಗಿತ್ತು
ಈ ವರ್ಷದ ಆರಂಭದಲ್ಲಿ ಮುಖ್ಯ ಶಿಕ್ಷಕಿ ಶಾಲೆಯ ಬಿಸಿಯೂಟದ ಧವಸಧಾನ್ಯ ಹಾಗೂ ಹಾಲಿನ ಪುಡಿಯನ್ನು ಕದ್ದೊಯ್ಯುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು.
ಜೂನ್ ತಿಂಗಳಿನಿಂದ ಮತ್ತೆ ಅದೇ ಶಾಲೆಗೆ ಬಂದ ಶಿಕ್ಷಕಿ, ಇತರ ಇಬ್ಬರು ಶಿಕ್ಷಕಿಯರೊಂದಿಗೆ ಜಗಳವಾಡಲು ಆರಂಭಿಸಿದ್ದು ಈ ಮೂವರು ಶಿಕ್ಷಕಿಯರಿಂದ ಶಾಲೆಯ ವಾತಾವರಣ ಹಾಳಾಗಿದೆ ಎಂದು ಗ್ರಾಮಸ್ಥರು ದೂರಿದರು.
ಹೀಗೆಯೇ ಮುಂದುವರೆದರೆ ಶಾಲೆ ಮುಚ್ಚುವ ಹಂತಕ್ಕೆ ತಲುಪಲಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಕಿರುಗುಂದ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ತೀವ್ರ ಚರ್ಚೆ ನಡೆದು ಶಿಕ್ಷಕಿಯರನ್ನು ಅಮಾನತುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.
ನಂತರ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ, ಮತ್ತು ಡಿಡಿಪಿಐ ಜಿ.ಕೆ.ಪುಟ್ಟರಾಜ್ ಅವರ ನೇತೃತ್ವದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದಾಗ, ಮೂವರು ಶಿಕ್ಷಕಿಯರು ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿತ್ತು.
ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದು ಅ. 21 ರಂದು ಅಮಾನತು ಆದೇಶ ಸಿದ್ದಗೊಂಡಿತ್ತು.
ಆದರೆ ಇದ್ದಕ್ಕಿದ್ದಂತೆ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅಮಾನತ್ತು ಆದೇಶವನ್ನು ಕಡೆ ಹಿಡಿಯಲಾಗಿದೆ. ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುವ ಹಾರಿಕೆಯ ಉತ್ತರ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂವರು ಶಿಕ್ಷಕಿಯರನ್ನು ಕೂಡಲೆ ಅಮಾನತುಗೊಳಿಸದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ತೀರ್ಮಾನಕ್ಕೂ ಪೋಷಕರು ಬಂದಿದ್ದಾರೆ. ಎಸ್ ಡಿ ಎಮ್ ಸಿ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.