ಚಿಕ್ಕಮಗಳೂರು-ನಗರಸಭೆಯ ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವಭಾವಿ ಸಭೆ ನಡೆಯಿತು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು ಹಲವು ಸಲಹೆ ನೀಡಿದರು.
ಇಂಜಿನೀಯರ್ ನಾಗೇಂದ್ರ ಮಾತನಾಡಿ, ನಗರಸಭೆ ಆರ್ಥಿಕ ಸಬಲತೆ ಕಂಡುಕೊಳ್ಳಲು ಕಂದಾಯ ವಸೂಲಾತಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಬಾಕಿ ಉಳಿಸಿಕೊಂಡವರಿಗೆ ಅಂಚೆ ಮೂಲಕ ವರ್ಷಕ್ಕೊಮ್ಮೆ ನೋಟೀಸು ಕಳಿಸುವ ಕೆಲಸ ಮಾಡಿದರೆ ಮನೆ ಮನೆಗೆ ಸಿಬ್ಬಂದಿ ತೆರಳಿ ಮನವರಿಕೆ ಮಾಡುವುದು ತಪ್ಪುತ್ತದೆ ಎಂದು ಸಲಹೆ ಮಾಡಿದರು.
ಕೆಲವರ ನಿವೇಶನ ಹಾಗೂ ಕಟ್ಟಡದ ಮೂಲ ಅಳತೆಗೂ ಕಂದಾಯ ಕಟ್ಟುತ್ತಿರುವ ಆಸ್ತಿಯ ಅಳತೆಗೂ ತುಂಬಾ ವ್ಯತ್ಯಾಸಗಳಿವೆ. ಈ ಮೂಲಕ ನಗರಸಭೆಗೆ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕತೆಯನ್ನೂ ಬಳಸಿಕೊಂಡು ನಿಖರವಾದ ಅಳತೆಯ ಜಮೀನಿನ ಕಂದಾಯ ವಸೂಲಾತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಂದಾಯ ಕಟ್ಟುತ್ತಿರುವವ ಮಾಹಿತಿ ಬಗ್ಗೆ ಡೇಟಾ ಎಂಟ್ರಿ ತಯಾರಿಸಿಟ್ಟುಕೊಂಡು ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಿಎಸ್‌ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನಗರದಲ್ಲಿ ಸಾಕಷ್ಟು ಅಕ್ರಮ ನಿವೇಶನ, ಕಟ್ಟಡ ನಿರ್ಮಾಣ ಮಾಡಿ ಮಾರಾಟ ಮಾಡುವುದು ನಡೆದೇ ಇದೆ ಅದನ್ನು ಗುರುತಿಸಿ ದಂಡ ವಿಧಿಸಿ ಅವುಗಳನ್ನು ಸಕ್ರಮಗೊಳಿಸುವುದು ಸೂಕ್ತ ಎಂದು ಹೇಳಿದರು.
ಅಕ್ರಮ ಬಡಾವಣೆ ನಿರ್ಮಾಣ ಮಾಡಿ ಮನೆಗಳನ್ನು ಬಾಡಿಗೆ ನೀಡುತ್ತಿದ್ದು ಅವರಿಗೆ ನೀರು, ವಿದ್ಯುತ್, ಚರಂಡಿ ಎಲ್ಲಾ ರೀತಿಯ ನಾಗರೀಕ ಸೌಲಭ್ಯ ನೀಡಲಾಗುತ್ತಿದ್ದರೂ ಅವುಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಿಕೊಟ್ಟರೆ ನಗರಸಭೆಗೂ ಆದಾಯ ಬರುತ್ತಿದೆ ಎಂದು ಸಲಹೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಕಾಂಕ್ರಿಟ್ , ಟಾರ್ ರಸ್ತೆ ಮಾಡುವಾಗ ಗುಣಮಟ್ಟ ಕಾಪಾಡಿಕೊಳ್ಳಬೇಕು. ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ಅದನ್ನು ಕತ್ತರಿಸಲು ಅವಕಾಶ ಕೊಡುತ್ತಿದ್ದು, ಮೊದಲಿನಂತೆ ಮುಚ್ಚಿಸುವ ಕುರಿತು ನಗರಸಭೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸಲಹೆಗಳನ್ನು ಆಲಿಸಿ ಸಾರ್ವಜನಿಕರು ತಮ್ಮ ವಾರ್ಡ್ಗಳಲ್ಲಿ ಸಂಘ, ಸಂಸ್ಥೆಗಳನ್ನು ರಚಿಸಿಕೊಂಡು ಕಸ ನಿರ್ವಹಣೆ, ಪ್ಲಾಸ್ಟಿಕ್ ನಿಯಂತ್ರಣ, ಪಾರ್ಕ್ ಅಭಿವೃದ್ಧಿ ಇನ್ನಿತರೆ ಕೆಲಸಗಳಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಪಾರ್ಕ್, ತೆರೆದ ಜಿಮ್ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಳ್ಳುವವರಿಗೆ ಅವರ ಉದ್ಯಮದ ಜಾಹಿರಾತು ಫಲಕ ಅಳವಡಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ಏಪ್ರಿಲ್ ವೇಳೆಗೆ ಕೆ-೨ ಗೆ ಲಿಂಕ್ ಆಗುತ್ತಿದೆ. ಅಷ್ಟರಲ್ಲಿ ಎಲ್ಲಾ ರೀತಿಯ ತೆರಿಗೆಗಳೂ ಪಾವತಿ ಆಗಿರಬೇಕು. ಈ ಕೆಲಸ ಪ್ರಗತಿಯಲ್ಲಿದೆ, ಸಲಹೆಗಳನ್ನು ಆಯ-ವ್ಯಯದಲ್ಲಿ ಅಳವಡಿಸಿಕೊಳ್ಳಲಳಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ನಾಮಿನಿ ಸದಸ್ಯರಾದ ಪ್ರಸಾದ್ ಅಮೀನ್, ಯಶೋಧಮ್ಮ, ಪ್ರಕಾಶ್ ರೈ, ಫಯಾಜ್, ಲೆಕ್ಕಾಧಿಕಾರಿ ಲತಾ ಮಣಿ ಇದ್ದರು.