ಚಿಕ್ಕಮಗಳೂರು : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್ ಕಿಟ್ ಒದಗಿಸಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿ ಕರಕುಶಲ ಮತ್ತು ಕುಶಲಕರ್ಮಿಗಳ ಕೈ ಬಲಪಡಿಸಲು ಅಗತ್ಯ ಕ್ರಮ ವಹಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕರಕುಶಲ ಮತ್ತು ಕುಶಲ ಕರ್ಮಿಗಳನ್ನು ಆರ್ಥಿಕವಾಗಿ ಬಲಪಡಿಸಿ ಅವರ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದರು.
ಈ ಯೋಜನೆಯ ಫಲವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಮವಹಿಸಬೇಕು, ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ೧೮ ವೃತ್ತಿಗಳನ್ನೊಳಗೊಂಡ ಕುಶಲಕರ್ಮಿಗಳಿಗೆ ಗುಣಮಟ್ಟದ ತರಬೇತಿ ನೀಡಿ ಆಧುನಿಕತೆಗೆ ಅನುಗುಣವಾಗಿ ತಮ್ಮ ಕೌಶಲ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕೆಂದರು.
ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಬಾಕಿ ಮಾಡದೆ ಸಾಲ ಮಂಜೂರು ಮಾಡಬೇಕು, ಗುಣಮಟ್ಟದ ತರಬೇತಿ ನೀಡಬೇಕು ಯೋಜನೆಯ ಫಲವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಖಾರಿ ಹೆಚ್.ಎಸ್ ಕೀರ್ತನಾ ಮಾತನಾಡಿ ಶೇ.೫ ರಷ್ಟು ಬಡ್ಡಿ ದರದಲ್ಲಿ ಬ್ಯಾಂಕುಗಳ ಮೂಲಕ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು ೪೬೯೯೦ ಅರ್ಜಿಗಳು ಸ್ವೀಕೃತವಾಗಿದ್ದು, ಇವರೆಗೆ ೨೪೨೨ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಸಾಲಕ್ಕಾಗಿ ೨೪೨೨ ಅರ್ಜಿಗಳು ಬಂದಿದ್ದು ೯೯೦ ಅಭ್ಯರ್ಥಿಗಳಿಗೆ ಸಾಲ ಮಂಜೂರಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಚಂದ್ರಶೇಖರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ವಿಶ್ವ ಕರ್ಮ ಯೋಜನೆ ಸಲಹಾ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಬ್ಯಾಂಕ್ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು
