ಚಿಕ್ಕಮಗಳೂರು: ಮಧ್ಯಮ ವರ್ಗದ ರೈತರ ವಿರುದ್ಧ ಇರುವ ಕಾನೂನುಗಳನ್ನೆಲ್ಲ ಕಟ್ಟಿ ಒಳಗಡೆ ಇಡಬೇಕು ,ಇಲ್ಲವಾದಲ್ಲಿ ಅರಣ್ಯ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ನಡೆಯಬೇಕು.
ಒಂದು ಎಕರೆ ಕಾಫಿ, ಅಡಿಕೆಯಲ್ಲಿ ಎಷ್ಟು ಉತ್ಪತ್ತಿ ಬರುತ್ತದೆ , ಈ ವರ್ಷದ ಈ ಮಳೆಯಲ್ಲಿ ಕಾಫಿ, ಅಡಿಕೆಯ ಫಸಲಿನ ಪರಿಸ್ಥಿತಿ ಏನಾಗಿದೆ ಗೊತ್ತಿದೆಯ ಎನ್ನುವುದು ಪ್ರಶ್ನೆ.
ಒಂದೆಡೆ ಕೊಳೆರೋಗಕ್ಕೆ ಅರ್ಧ ಫಸಲು ನೆಲ ಕಚ್ಚಿದ್ರೆ, ಎಲೆ ಚುಕ್ಕಿ ರೋಗಕ್ಕೆ ಅಡಿಕೆ ಸುಳಿ ಒಂದು ಉಳಿತಿದೆ. ಹೀಗಾದ್ರೆ ಈ ನೆಲದ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು, ಅವ್ರಿಗೆ ಉತ್ತಮ ಉದ್ಯೋಗ ಕೊಡಿಸುವುದು ಹೇಗೆ?
ಇದಕ್ಕೆ ಸಚಿವರ ಬಳಿ ಉತ್ತರ ಇರುವುದಿಲ್ಲ ಏಕೆಂದರೆ …..
ಅವರ ಮಗ(ಅರಣ್ಯ ಸಚಿವರ) ಸಂಸದರಲ್ಲವೇ ? ಪ್ರಜಾಪ್ರಭುತ್ವದ ಸೌಧದ ಒಳಗೆ ಕೂತವರ ಮಕ್ಕಳು ವಿದೇಶಿಗಳಲ್ಲಿ ಓದುತ್ತ, ಅಪ್ಪನ ಹೆಸರು ಹೇಳಿಕೊಂಡು ರಾಜಕೀಯದ ಅಧಿಕಾರ ಅನುಭವಿಸುತ್ತ ಐಷಾರಾಮಿ ಜೀವನ ಅನುಭವಿಸುತ್ತಿರುವಾಗ ಕಂಡೋರ ಮಕ್ಕಳ ಭವಿಷ್ಯದ ಚಿಂತೆ ಯಾಕೆ ಬರಬೇಕು
ಡ್ರೋನ್ ಕ್ಯಾಮರಾ ಹಾರಿಸಿ ಜಲಪಾತ ಕಾಡು ಚಿತ್ರಿಸಿ, ದೂರದಿಂದ ತೆಗೆದ ಗದ್ದೆ ತೋಟದ ಫೋಟೋ ನೋಡಿ ಮಲೆನಾಡು ಸ್ವರ್ಗ ಅಂತೀರಲ್ಲ ಅದಲ್ಲ ಮಲೆನಾಡು.
ಈ ಬಾರಿಯ ನಟ್ಟಿಯ ಸಮಯದಲ್ಲಿ ಆ ಬಿಸಿಲಿನ ಹೊಡೆತಕ್ಕೆ ಮುಖ ಮೈ ಬೆಂದು ಹೋಗಿದೆ. ರೋಗ ಬಡಿದ ತೋಟ ನೋಡುವಾಗ ಭವಿಷ್ಯ ಹೇಗೆ ಎನ್ನುವ ಜ್ವರ ಏರಿ ಕೂತಿದೆ.
ಹೌದು ಗೊತ್ತಿದೆ !
ಮಧ್ಯ ಮಳೆಗಾಲದಲ್ಲಿ ಬಿಸಿಲಿನ ಹೊಡೆತ ಜಾಗತಿಕ ತಾಪಮಾನ ವೈಪರೀತ್ಯ ಅಲ್ಲವೇ? ಇದರ ಸಂಪೂರ್ಣ ಹೊಣೆ ರೈತರದ್ದೇ ಆಗಿದೆಯೇ ಅಥವಾ ವೈಭವದ ಬದುಕು ಮಾಡಿದವರು ಕಾರಣವಲ್ಲವೇ?
ನಿಮ್ಮ ಪಟ್ಟಣಕ್ಕೆ, ಅಲ್ಲಿಯ ಅಭಿವೃದ್ಧಿಗೆ, ಸಾವಿರಾರು ಕೋಟಿಯ ಫ್ಯಾಕ್ಟರಿ ಕಟ್ಟುವುದಕ್ಕೆ, ಅವೈಜ್ಞಾನಿಕ ಅಭಿವೃದ್ಧಿಯ ಟೆಂಡರ್ ಗಳ ತಡೆಯುವುದಕ್ಕೆ ಯಾವ ಕಾನೂನಿದೆ ? ಇಲ್ಲ.
ಯಾಕೆ ಹೇಳಿ ?
ಅಲ್ಲೆಲ್ಲ ಕಿಕ್ ಬ್ಯಾಕ್ ಬರುತ್ತದೆ. ಪರ್ಸಂಟೇಜ್ ಲೆಕ್ಕದಲ್ಲಿ ಲಂಚ ಬಂದು ಬೀಳುತ್ತದೆ. ನಾವು ರೈತರು ಕಿಕ್ ಬ್ಯಾಕ್ ಕೊಡುವುದಿಲ್ಲ ನೋಡಿ ಹಾಗಾಗಿ ಈ ಅಸಡ್ಡೆ!
ತೋಟಗಳ ತೆರವಿಗೆ ಆದೇಶ ಹೊರಡಿಸಿದ ಹಾಗೆ, ಗುಡ್ಡ ಕಡಿದು ರಸ್ತೆ ಮಾಡಿದವನ ಮೇಲೂ ಆಕ್ಷನ್ ತೆಗೆದುಕೊಂಡಿದ್ದರೆ ನಿಮ್ಮನ್ನ (ಅರಣ್ಯ ಸಚಿವರನ್ನು) ದೂರುತ್ತಿರಲಿಲ್ಲ.
ಕಸ್ತೂರಿ ರಂಗನ್ ವರದಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಇಲ್ಲಿಯ ಪರಿಸರವನ್ನ ಹಾಳುಗೆಡವಲು ತಯಾರಾಗಿರುವ ಯೋಜನೆಗಳನ್ನ ತಡೆಹಿಡಿದಿದ್ದರೆ ದೂರುತ್ತಿರಲಿಲ್ಲ. ನಿಮ್ಮ ಪೌರುಷವೆಲ್ಲ ರೈತರ ಮೇಲೆಯೇ ಆಗುತ್ತಿದೆ ನೋಡಿ ಅದು ಬೇಸರ.
ನಮ್ಮಲ್ಲಿ ಒಗ್ಗಟ್ಟಿಲ್ಲ ಎನ್ನುವ ನಮ್ಮ ನಡುವಿನ ಒಡಕು ಹೇಗೂ ಗೊತ್ತಿದೆ , ಸಾವಿರ ಜನ ಸೇರಿಸಿ ಪ್ರತಿಭಟನೆ ಮಾಡುವಾಗ ಎಲ್ಲಾದರೂ ಅವರ ಪಕ್ಷದ ರಾಜಕೀಯ ಮುಖಂಡರಿಗೆ ನೋವಾಗುವಂತ ಒಂದು ಮಾತು ಬಂದರೆ ಅಲ್ಲೇ ನಿಂತಲ್ಲೇ ಮೂರು ಗುಂಪುಗಳಾಗಿ ಹೊಡೆದಾಡಿಕೊಳ್ಳಲು ಸಿದ್ಧರಿರುವಷ್ಟು ಒಗ್ಗಟ್ಟು ನಮ್ಮ ನಡುವಿದೆ ಎನ್ನುವುದು ನಿಮಗೆ ಅರಿವಿದೆ.
ಯಾವ ಸರ್ಕಾರದ ವಿರುದ್ದವೂ ನಮ್ಮ ಹೋರಾಟ ಅಲ್ಲ, ನಮ್ಗೆ ನ್ಯಾಯ ಬೇಕು ಅಷ್ಟೆ ಎಂದು ನಾವೇ ಮುಂದೆ ನಿಂತು ಶಾಸಕಾಂಗದವರ ಸುತ್ತ ನಿಂತು ಅರಣ್ಯ ಇಲಾಖೆಗೆ ಅರಣ್ಯ ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತೇವೆ.
ಅಧಿಕಾರಿ ವರ್ಗ ಶಾಸನದಲ್ಲೇನಿದೆ ಅದನ್ನೇ ಮಾಡುವುದಲ್ಲವೇ ? ನಾವು ಮೊದಲು ಧಿಕ್ಕಾರ ಹೇಳಬೇಕಾದ್ದು ನಮ್ಮನ್ನ ಆಳುವವರಿಗೆ. ಆದರೆ ಅದಾಗುತ್ತಿಲ್ಲ ಕಾರಣ ಪಕ್ಷಗಳ ಅಡಿಸೇರಿ ಕುಳಿತಿದ್ದು !!
ಈಗಿನ ಅರಣ್ಯ ಸಚಿವರನ್ನ ಬೈದರೆ ಕಾಂಗ್ರೆಸ್ ಅವರಿಗೆ ಬೇಸರ, ಕೇಂದ್ರಕ್ಕೆ ಉಗಿದರೆ ಬಿಜೆಪಿ ಜೆಡಿಎಸ್ ಅವರಿಗೆ ಬೇಸರ. ವೈಯುಕ್ತಿಕವಾಗಿ ನಾನು ಯಾವ ಪಕ್ಷದ ಅಡಿಯಾಳು ಅಲ್ಲ.
ಪಕ್ಷಾತೀತವಾಗಿ ಹೇಳುವುದೊಂದೆ, ಮಧ್ಯಮ ವರ್ಗದ ರೈತರ ವಿರುದ್ದ ನಿಮ್ಮ ಕಾನೂನು ಏನಿವೆ ,ಅವುಗಳನ್ನ ಕಟ್ಟಿ ಒಳಗಿಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ನಡಿರಿ ಅಷ್ಟೆ.
ನಮ್ಮ ನೆಲ ಉಳಿಯಬೇಕಾದರೆ ನಮ್ಮನ್ನಾಳುವವರಿಗೆ ಪಕ್ಷಾತೀತವಾಗಿ ನಿಂತು ಬಿಸಿ ಮುಟ್ಟಿಸುವುದೊಂದೆ ದಾರಿ.
◆ ದಿಗಂತ್ ಬಿಂಬೈಲ್.