ಚಿಕ್ಕಮಗಳೂರು: “ಮನೆಮನೆಗೆ ಪೊಲೀಸ್” ಉಪಕ್ರಮವು ಸಮಾಜದಲ್ಲಿ ಅಪರಾಧ ತಡೆಗೆ ಸಹಕಾರಿ ಆಗುವುದಲ್ಲದೆ, ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಸರ್ವರನ್ನೂ ಸಮಾನವಾಗಿ ಒಳಗೊಂಡು ಸಾರ್ವಜನಿಕರು ಈ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿ, ಸಾಮಾಜಿಕ ಪಿಡುಗುಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ವ್ಯವಸ್ಥೆಯು ಒಂದು ಆಶಾಕಿರಣ ಎಂದಿದ್ದಾರೆ.
ಈ ಮೂಲಕ ಪೊಲೀಸರ ಬಗ್ಗೆ ಇರುವ ಭಯದ ಭಾವದ ಬದಲು ವಿಶ್ವಾಸದ ಚಿಹ್ನೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸಲು ಪೊಲೀಸ್ ಇಲಾಖೆಯು ಈ ನೂತನ ಉಪಕ್ರಮವನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ, ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರ ನಡುವೆ ನೇರ ಸಂವಹನವನ್ನು ಸ್ಥಾಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿದಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಕೇಳಿ ತ್ವರಿತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಮಾದಕ ವಸ್ತುಗಳ ದುರ್ಬಳಕೆ ಇತ್ತೀಚಿನ ದಿನಗಳಲ್ಲಿ ಒಂದು ಜಾಗತಿಕ ಸಮಸ್ಯೆಯಾಗಿದ್ದು ಸಂಕೀರ್ಣ ಸವಾಲಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿದಾಗ ಇವುಗಳ ಬಗ್ಗೆ ಅರಿವು ಮೂಡಿಸುತ್ತಾರೆ ಎಂದು ಹೇಳಿದ್ದಾರೆ.
“ಮನೆಮನೆಗೆ ಪೊಲೀಸ್” ಉಪಕ್ರಮದ ಭಾಗವಾಗಿ ಶಾಲಾ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರ ಮತ್ತು ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆಗಳನ್ನು ಏರ್ಪಡಿಸಲಾಗುತ್ತದೆ ಎಂದಿದ್ದಾರೆ
ಈ ಉಪಕ್ರಮದ ಪ್ರಮುಖ ಪ್ರಯೋಜನಗಳು
1. ಅಪರಾಧ ತಡೆಗೆ ಸಹಕಾರಿ ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು.
2. ಜನರಲ್ಲಿ ನಂಬಿಕೆ ಬೆಳೆಸುವುದು ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧ ನಿರ್ಮಾಣ
3. ಶಾಂತಿ ಮತ್ತು ಭದ್ರತೆ ಕಾಪಾಡುವುದು ಸ್ಥಳೀಯರ ಸಹಕಾರದಿಂದ ಸಮುದಾಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆ.
4. ಸ್ಥಳೀಯ ಸಮಸ್ಯೆಗಳ ಪರಿಹಾರ ಸಮುದಾಯ ಪೊಲೀಸ್ ವ್ಯವಸ್ಥೆಯ ಮೂಲಕ ಸ್ಥಳೀಯ ಮಟ್ಟದ ವಿಶೇಷ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು.
5. ಪೋಲೀಸರು ಜನರ ಹತ್ತಿರ ಬರುತ್ತಾರೆ ಪೊಲೀಸರು ‘ಭಯದ ಪಾತ್ರ” ದಿಂದ “ಮಿತ್ರನ ಪಾತ್ರ” ದತ್ತ ಸಾಗುತ್ತಾರೆ.
6. ಅಪರಾಧದ ಕುರಿತು ಜಾಗೃತಿ – ಸಾರ್ವಜನಿಕರಲ್ಲಿ ಕಾನೂನು ಹಾಗೂ ಅಪರಾಧ ತಡೆ ಬಗ್ಗೆ ಅರಿವು
7. ಯುವಜನತೆಗೆ ಮಾರ್ಗದರ್ಶನ ಸಹಾಯ ಮಾಡುತ್ತದೆ. ಯುವಜನರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ತೊಡಗಿಸಲು ಸಹಕಾರಿ.
8. ಸಮಾಜದಲ್ಲಿ ಸಹಭಾಗಿತ್ವ ನಾಗರಿಕರು ಮತ್ತು ಪೊಲೀಸರು ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣ
9. ಸೈಬರ್ ಅಪರಾಧ, ನಕಲಿ ಮಾಹಿತಿ ತಡೆಯಲು ನೆರವು ಜನರಿಗೆ ಈ ವಿಷಯಗಳಲ್ಲಿ ಶಿಕ್ಷಣ
10. ಆಪತ್ತಿನ ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ವಿಪತ್ತುಗಳು ಅಥವಾ ತುರ್ತು ಸಂದರ್ಭದಲ್ಲಿ ಜನಸಹಕಾರದ ಮೂಲಕ ಪೊಲೀಸರು ಶೀಘ್ರದಲ್ಲಿ ಸಹಾಯ
ಪ್ರಸ್ತುತ ಪೊಲೀಸ್ ಸೇವೆಯು ಬಹುತೇಕವಾಗಿ “ಪ್ರತಿಕ್ರಿಯೆ ಸೇವೆ” ಯನ್ನು ಮಾತ್ರವೇ ಒದಗಿಸುತ್ತಾ ಬಂದಿದೆ. ಅಂದರೆ, ಸಾರ್ವಜನಿಕರು ನೀಡುವ ದೂರುಗಳ / ಅಹವಾಲುಗಳ ಅಧಾರದ ಮೇಲೆ ಮಾತ್ರವೇ ಪ್ರತಿಕ್ರಿಯಿಸಲಾಗುತ್ತಿದೆ.
ಆದರೆ ಈ ವ್ಯವಸ್ಥೆಯನ್ನು “ಸಕ್ರಿಯ ಸೇವೆ” (Pro-active Policing) ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇಂತಹ ನಡೆಯಿಂದ ಪೊಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಹೆಚ್ಚುವುದರೊಂದಿಗೆ, ಜನರು ಮತ್ತು ಪೋಲಿಸರು ನಿಕಟ ಸಂಬಂಧದ ಪರಿಣಾಮವಾಗಿ, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪುಗೊಂಡಿರುತ್ತದೆ.